ಗಾಡರ್ನರ್, ಅರ್ಲ್ ಸ್ಟ್ಯಾನ್ಲೀ
1889-1970. ಅಮೆರಿಕ ಸಂಯುಕ್ತಸಂಸ್ಥಾನದ ಪತ್ತೇದಾರಿ ಕಾದಂಬರಿಕಾರ. ಪೆರೀ ಮೇಸನ್ ಎಂಬ ಜನಪ್ರಿಯ ಪತ್ತೇದಾರ ಪಾತ್ರದ ಪ್ರವರ್ತಕ. ಮೆಸಾಚುಸೆಟ್ಸನ ಮಾಲ್ಡನ್ನಲ್ಲಿ 1889ರ ಜುಲೈ 17ರಂದು ಹುಟ್ಟಿದ. ವೆಂಟ್ಯುರ ಕೌಂಟಿಯಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ (1911) ಸುಮಾರು 20 ವರ್ಷಗಳ ಕಾಲ ಸಮರ್ಥವಾಗಿ ದುಡಿದ. 1921ರಲ್ಲಿ ಪತ್ತೇದಾರಿ ಕತೆಗಳಿಗೇ ಮೀಸಲಾದ ಪತ್ರಿಕೆಗಳಿಗೆ ಕತೆಗಳನ್ನು ಬರೆಯಲು ಪ್ರಾರಂಭಿಸಿದ. ಈತನ ಮೊದಲ ಕಾದಂಬರಿ ದಿ ಕೇಸ್ ಆಫ್ ದಿ ವೆಲ್ವೆಟ್ ಕ್ಲಾತ್ 1932ರಲ್ಲಿ ಪ್ರಕಟವಾಯಿತು. ಅನಂತರ ವಕೀಲವೃತ್ತಿಗೆ ತಿಲಾಂಜಲಿಯಿತ್ತು ಪುರ್ಣಕಾಲಿಕ ಲೇಖಕನಾದ. ಲೇಖನವೃತ್ತಿಯಲ್ಲಿ ಮೊದಲ 25 ವರ್ಷಗಳಲ್ಲಿ ಈತ ಒಟ್ಟು 54 ಕೃತಿಗಳನ್ನು ಹೊರತಂದ. ಎಡ್ಗರ್ ವ್ಯಾಲೆಸ್ನಂತೆ ಈತನೂ ಡಿಕ್ಟಫೋನ್ ಬಳಸಿಕೊಂಡು ತನ್ನ ಕತೆಗಳನ್ನು ಹೇಳಿ ರೆಕಾರ್ಡ್ ಮಾಡುತ್ತಿದ್ದನಂತೆ. ಇವುಗಳ ಒಟ್ಟು 7 ಕೋಟಿ 50 ಲಕ್ಷ ಪ್ರತಿಗಳು ಕೇವಲ ಉತ್ತರ ಅಮೆರಿಕದಲ್ಲಿಯೇ ಮಾರಾಟವಾದುವಂತೆ.

ಈತನ ಬಹುಪಾಲು ಕಾದಂಬರಿಗಳು ಪೆರೀ ಮೇಸನ್ ಎಂಬ ತೀಕ್ಷ್ಣಮತಿ ವಕೀಲನ ಪತ್ತೇದಾರಿ ಅದ್ಭುತಗಳಿಂದ ಕೂಡಿವೆ. ಕಥೆಯನ್ನು ತುಂಬ ವೇಗವಾಗಿ ಆದರೆ ಪ್ರತಿ ಹೆಜ್ಜೆಯಲ್ಲೂ ಕಾನೂನುಬದ್ಧವಾಗಿ ಹೇಳುವುದು ಗಾಡ್ರ್ ನರನ ಕ್ರಮ. ಕಾದಂಬರಿಯ ಪ್ರಕರಣಗಳು ಹೆಚ್ಚು ಕುತೂಹಲ ಕೆರಳಿಸಿ ಕೋರ್ಟಿನಲ್ಲಿ ಮುಕ್ತಾಯವಾಗುತ್ತವೆ. ಎ.ಎ.ಫೇರ್ ಎಂದು ಹೆಸರಿಟ್ಟಕೊಂಡು ಈತ ಕೆಲವು ನಿಗೂಢ (ಮಿಸ್ಟರಿ) ಕಾದಂಬರಿಗಳನ್ನು ಬರೆದಿದ್ದಾನೆ.

ಗಾಡರ್ನರ್ ಅಪರಾಧಶಾಸ್ತ್ರದಲ್ಲಿ ಬಹಳಷ್ಟು ಆಸ್ಥೆ ವಹಿಸಿ ಸಂಶೋಧನ ಕೆಲಸ ಮಾಡಿದ್ದಾನೆ. ಮಿಥ್ಯಾಪವಾದಕ್ಕೆ ಗುರಿಯಾಗಿ ಕಾರಾಗೃಹ ಸೇರಿದವರ ರಕ್ಷಣೆಗೆ ಈತ 1948ರಲ್ಲೊಂದು ಸಂಸ್ಥೆಯನ್ನು ಪ್ರಾರಂಭಿಸಿದ. ದಿ ಹೌಲಿಂಗ್ ಡಾಗ್ (1934), ದಿ ಸ್ಟಟರಿಂಗ್ ಬಿಷಪ್ (1936), ದಿ ಲೇಮ್ ಕ್ಯಾನರಿ (1937), ದಿ ಡ್ರೌನಿಂಗ್ ಡಕ್ (1942), ದಿ ರನ್ಅವೇ ಕಾಪ್ರ್ಸ (1954) ಮುಂತಾದವು ಪೆರೀ ಮೇಸನ್ನನನ್ನೇ ನಾಯಕನನ್ನಾಗುಳ್ಳ ಈತನ ಕೆಲವು ಪ್ರಸಿದ್ಧ ಕಾದಂಬರಿಗಳು. ಇವಲ್ಲದೆ ಈತ ಜಿಲ್ಲಾ ಅಟೋರ್ನಿ ಡಗ್ಲಾಸ್ ಸೆಲ್ಬಿಯನ್ನು ನಾಯಕನನ್ನಾಗುಳ್ಳ ದಿ ಡಿ. ಎ. ಕಾಲ್ಸ ಇಟ್ ಮರ್ಡರ್ (1937) ದಿ ಡಿ.ಎ. ಕಾಲ್್ಸ ಎ ಟರ್ನ್ (1954) ಮೊದಲಾದ ಕಾದಂಬರಿ ಗಳನ್ನು ರಚಿಸಿದ್ದಾನೆ. ಅಮೆರಿಕದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣ ಸಂಸ್ಥೆ ನಡೆಸಿದ ಒಂದು ಪ್ರಯೋಗದಿಂದ ಸಂಯುಕ್ತಸಂಸ್ಥಾನದಲ್ಲಿ ಗಾಡ್ರ್ನರ್ ತನ್ನ ಕಾಲದ ಅತಿದೊಡ್ಡ ಜನಪ್ರಿಯ ಪತ್ತೆದಾರಿ ಕತೆಗಾರನೆಂದು ತಿಳಿಯುತ್ತದೆ. ಇವನಿಗೆ ಎರಡನೆಯವನು ಷರ್ಲಾಕ್ ಹೋಮ್ಸಮ್ನನ್ನು ಸೃಷ್ಟಿಸಿದ ಕಾನನ್ ಡಾಯಲ್. 
ಗಾಡರ್ನರ್ ಕಾದಂಬರಿಗಳಲ್ಲಿ ಪೆರೀ ಮೇಸನನ ಕಕ್ಷಿಗಾರ (ಅಥವಾ ಕಕ್ಷಿಗಳು) ಒಂದು ವ್ಯೂಹದಲ್ಲೇ ಸಿಕ್ಕಿಕೊಳ್ಳುತ್ತಾನೆ. ಇನ್ನೇನು, ಅವನ ಅಪರಾಧ ಸಾಬೀತಾಯಿತು ಸೆರೆಮನೆಗೋ ಗಲ್ಲಿಗೋ ಹೋಗುವುದು ಅನಿವಾರ್ಯ ಎನ್ನುವ ಹಂತದಲ್ಲಿ ಪೆರೀ ಮೇಸನ್ಗೆ ಹೊಳೆದ ಉತ್ತರದಿಂದ ಕಕ್ಷಿಗಾರ ಪಾರಾಗುತ್ತಾನೆ, ಮೊಕದ್ದಮೆಯು ಕೋಲಾಹಲಕರವಾಗಿ ಮುಕ್ತಾಯವಾಗುತ್ತದೆ. ಹಲವೊಮ್ಮೆ ಮೇಸನನಿಗೆ ತೇಜೋವಧೆ ಮಾಡುತ್ತೇವೆ ಎಂದು ಬೀಗುತ್ತಿರುವ ಪೊಲೀಸರಿಗೆ ತೇಜೋವಧೆ ಯಾಗುತ್ತದೆ. ಹಿಂದಿನ ಕಾಲದ ಸಾಹಸ ಕಥೆಗಳ ಅದ್ಭುತ ಶಕ್ತಿಯ ನಾಯಕ ಈ ಕಾದಂಬರಿಗಳಲ್ಲಿ ಆಧುನಿಕ ವಕೀಲನಾಗಿ ಕಾಣಿಸಿಕೊಳ್ಳುತ್ತಾನೆ. (ಲಾರ್ಜಿಕ್ ದೇನ್ ಟೈಫ್) ಅಸಾಧಾರಣ ವ್ಯಕ್ತಿಗಳನ್ನು ಕಾಣುವ ಓದುಗನ ಬಯಕೆ ಇಲ್ಲಿ ತೃಪ್ತಿಹೊಂದುತ್ತದೆ. ಗಾಡರ್ನರ್ 1970ರ ಮಾರ್ಚ್ 11ರಂದು ನಿಧನನಾದ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ